Category Archives: ಮಾದರಿ ಶಾಲೆಗಳು (ಪ್ರೌಢಶಾಲೆ ವಿಭಾಗ)

ಹಳ್ಳಿಖೇಡ್ – ಸರ್ಕಾರಿ ಪ್ರೌಢ ಶಾಲಾ ಮಕ್ಕಳ ಚಿತ್ರಕಲಾ ಪ್ರೀತಿ.

ಶಾಲಾ ಗೋಡೆಗಳಲ್ಲಿ ಮಕ್ಕಳು ಬಿಡಿಸಿದ ಚಿತ್ತಾರ…

image

     
ಬೀದರ್: ಚಿತ್ರಕಲೆ ಕುರಿತು ವಿದ್ಯಾರ್ಥಿಗಳಲ್ಲಿ­ರುವ ಆಸಕ್ತಿ, ಅಭಿರುಚಿಯನ್ನೇ ಬಳಸಿಕೊಂಡು, ಶಾಲೆಯ ಗೋಡೆಗಳಿಗೆ ಚಿತ್ತಾರ ತೊಡಿಸಿದ ಬೆಳವಣಿಗೆಗೆ ಹುಮನಾಬಾದ್ ತಾಲ್ಲೂಕು ಹಳ್ಳಿಖೇಡ್ (ಕೆ) ಗ್ರಾಮದ ಸರ್ಕಾರಿ ಪ್ರೌಢಶಾಲೆ ಸಾಕ್ಷಿಯಾಗಿದೆ.

ಶಾಲೆಯ 8 ಮತ್ತು 9ನೇ ತರಗತಿಯ ವಿದ್ಯಾರ್ಥಿಗಳು ಶಾಲೆಯ ಗೋಡೆಗಳಿಗೆ ಈಚೆಗೆ ಇರುವೆಗಳ ಸಾಲು, ಪ್ರಕೃತಿ, ಜೀವಿಗಳನ್ನು ಒಳಗೊಂಡ ಚಿತ್ರಣವನ್ನು ಅಚ್ಚುಕಟ್ಟಾಗಿ ಬಿಡಿಸುವ ಮೂಲಕ ತಮ್ಮ ಶಾಲೆಗೆ ರೂಪ ಹೆಚ್ಚಿಸಿದ್ದಾರೆ.

ಹುಮನಾಬಾದ್– ಕಲಬುರ್ಗಿ ಮಾರ್ಗದ­ಲ್ಲಿ, ಹೆದ್ದಾರಿಗೆ ಹೊಂದಿಕೊಂಡಂತಿರುವ ಶಾಲೆ­ಯಲ್ಲಿ ಈ ಪ್ರಯೋಗ ನಡೆದಿದೆ. ದಸರಾ ರಜೆ ಅವಧಿ­ಯಲ್ಲಿ ಶಾಲೆಯಲ್ಲಿಯೇ ಚಿತ್ರಕಲಾ ಶಿಬಿರ ಆಯೋಜಿಸುವ ಮೂಲಕ ಚಿತ್ರಕಲಾ ಶಿಕ್ಷಕ ಗುಂಡಪ್ಪ ಗೌಡಗೋಳ ಪ್ರೇರಣೆ ಆಗಿದ್ದಾರೆ. ಆಸಕ್ತರರನ್ನು ಆಯ್ಕೆ ಮಾಡಿಕೊಂಡು ಶಿಬಿರ ನಡೆಸಲಾಯಿತು. ಮೂವರಷ್ಟೇ ಬಾಲಕರಿದ್ದರು. ಉಳಿದವರೆಲ್ಲಾ ವಿದ್ಯಾರ್ಥಿನಿಯರು

image

ಶಾಲೆಯ ಗೋಡೆಗಳಿಗಷ್ಟೇ ಅಲ್ಲ, ಇಲ್ಲಿ ಕಲಿತದ್ದನ್ನು ಕೆಲ ವಿದ್ಯಾರ್ಥಿಗಳು ತಮ್ಮ ಮನೆಯಲ್ಲಿಯೂ ಪ್ರಯೋಗ ಮಾಡಿ, ಅಲಂಕರಿಸಿದ್ದಾರೆ ಎನ್ನುತ್ತಾರೆ ಗೌಡಗೋಳ.

ಮಕ್ಕಳಿಗೆ ಅವರ ಆಸಕ್ತಿಗೆ ಅನುಗುಣವಾಗಿ ಚಿತ್ರ ಬಿಡಿಸಲು ಮುಕ್ತ ಅವಕಾಶ ನೀಡಲಾ­ಯಿತು. ಅವರಲ್ಲಿಯೇ ಗುಂಪು ಮಾಡಿಕೊಂಡ­ರು. ಇರುವೆ ಸಾಲು, ಮರ, ಪಕ್ಷಿಗಳ ಗುಂಪು, ವಿಜ್ಞಾನ ಪಠ್ಯವನ್ನು ಆಧರಿಸಿದ ಚಿತ್ರಗಳನ್ನು ಮಕ್ಕಳು ಗೋಡೆಗಳಲ್ಲಿ ಮೂಡಿಸಿದ್ದಾರೆ.

ಅಂತಿಮಗೊಂಡ ಬಳಿಕ ಅನುಭವಿ ಚಿತ್ರಕಾರ ಮೂಡಿಸಿದಷ್ಟೇ ಚೆನ್ನಾಗಿ ಚಿತ್ರಗಳು ಮೂಡಿಬಂದಿದ್ದು, ಶಾಲೆಯ ಕಟ್ಟಡಕ್ಕೆ ಹೊಸ ಮೆರುಗು ನೀಡಿದೆ. ವಿದ್ಯಾರ್ಥಿನಿಯರು ಅಲ್ಲಲ್ಲಿ ತಪ್ಪು ಮಾಡಿದ್ದರು, ಒಮ್ಮೆ ತಿದ್ದಿ ಹೇಳಿಕೊಟ್ಟ ಬಳಿಕ ಅದರಂತೆ ರೂಪಿಸಿದರು ಎಂದು ಶಿಕ್ಷಕರು ಹೆಮ್ಮೆ ಯಿಂದ ಹೇಳಿದರು.

ಮಕ್ಕಳಿಗೆ ಚಿತ್ರಕಲೆಯೂ ಕೂಡಾ ಒಂದು ವಿಷಯವಾಗಿದ್ದು, ವಾರಕ್ಕೆ ಮೂರು ತರಗತಿಗಳು ಇರುತ್ತವೆ. ಅಲ್ಲದೆ, ದಸರಾ ಅವಧಿಯಲ್ಲಿ ನಡೆದ ಶಿಬಿರದಲ್ಲಿ ಲಭ್ಯ ಸಂಪನ್ಮೂಲಗಳನ್ನೇ ಬಳಸಿ ದೀಪಾವಳಿಯ ಆಕಾಶಬುಟ್ಟಿ, ಆಮೆ, ವಿಜ್ಞಾನದ ಪ್ರಯೋಗಳು, ಫೋಟೋ ಚೌಕಟ್ಟು ಇತ್ಯಾದಿಯನ್ನು   ರೂಪಿಸಿದ್ದ

image

ಾರೆ.

ಪ್ರಸ್ತುತ ಒಮ್ಮೆ ಶಾಲೆಯ ಆವರಣ ಮತ್ತು ಚಿತ್ರಕಲಾ ತರಗತಿಯ ಕೊಠಡಿಯನ್ನು ಪ್ರವೇಶಿಸಿದರೆ ಚಿತ್ರಕಲೆಯತ್ತ ಗ್ರಾಮೀಣ ಮಕ್ಕಳಿಗೆ ಇರುವ ಆಸಕ್ತಿ, ಅಭಿರುಚಿ ಮತ್ತು ಪ್ರತಿಭೆ ಎಲ್ಲವೂ ಅನಾವರಣಗೊಳ್ಳಲಿದೆ.

ಧನ್ನೂರು ಶಾಲೆಯ ಸುಂದರ ಉದ್ಯಾನ.

ಧನ್ನೂರು ಶಾಲೆ ‘ಹಸಿರು ಪ್ರೀತಿ’

ಬಸವರಾಜ ಎಸ್‌. ಪ್ರಭಾ     
ಭಾಲ್ಕಿ: ತಾಲ್ಲೂಕಿನ ಧನ್ನೂರು (ಎಚ್‌) ಗ್ರಾಮದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಸುಂದರ ಉದ್ಯಾನವೊಂದನ್ನು ಹೊಂದುವ ಮೂಲಕ ಗಮನ ಸೆಳೆದಿದೆ. ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಹಸಿರು ಪ್ರೀತಿಯಿಂದಾಗಿ ಶಾಲೆ ಆವರಣ ಉದ್ಯಾನವಾಗಿ ಪರಿವರ್ತನೆಗೊಂಡಿದೆ. ಆವರಣದ ತುಂಬ ಬಗೆ ಬಗೆಯ ಹೂವು, ಬಳ್ಳಿ, ಮರ ಗಿಡಗಳು ಹಸಿರಿನಿಂದ ಕಂಗೊಳಿಸುತ್ತಿವೆ.

image

ಹಸಿರು ಪರಿಸರ ಶಾಲೆ ಅಂದವನ್ನು ಹೆಚ್ಚಿಸಿದೆ. ವಿದ್ಯಾರ್ಥಿಗಳಿಗೆ ವಿರಾಮದ ವೇಳೆ ಆರಾಮಾಗಿ ಕುಳಿತುಕೊಳ್ಳಲು ವೇದಿಕೆ ಒದಗಿಸಿದೆ. ಉದ್ಯಾನದಲ್ಲಿ ವಿವಿಧ ಪ್ರಕಾರದ ನೂರಾರು ಸಸಿಗಳು ಇವೆ. ಹೂವು, ಅಲಂಕಾರಿಕ ಸಸಿಗಳು, ಜಾಪುಳ, ಅಶೋಕ, ನೀಲಗಿರಿ, ಬೇವು ಮತ್ತಿತರ ಗಿಡಗಳು ಇವುಗಳಲ್ಲಿ ಸೇರಿವೆ.

ಶಾಲೆ ಆವರಣದ ಮೂಲಕ ವರ್ಗ ಕೋಣೆಗೆ ನಡೆದು ಹೋದರೆ ಸುಂದರ ಉದ್ಯಾನಕ್ಕೆ ಹೋದಂತೆ ಭಾಸವಾಗುತ್ತದೆ. ತಂಪು, ಪ್ರಶಾಂತ ವಾತಾವರಣ ಮನಸ್ಸನ್ನು ಉಲ್ಲಸಿತಗೊಳಿಸುತ್ತದೆ. ಶಾಲೆಯಲ್ಲಿ 8ರಿಂದ 10ನೇ ತರಗತಿವರೆಗೆ ಒಟ್ಟು 152 ವಿದ್ಯಾರ್ಥಿಗಳು ಇದ್ದಾರೆ. ವಿದ್ಯಾರ್ಥಿಗಳು ಪ್ರತಿನಿತ್ಯ ತಮ್ಮ ಬಿಡುವಿನ ಸಮಯವನ್ನು ವ್ಯರ್ಥ ಮಾಡದೆ ಉದ್ಯಾನದಲ್ಲಿ ಬೆಳೆದುನಿಂತ ಕಳೆ ತೆಗೆಯುತ್ತಾರೆ.

ಗಿಡಗಳಿಗೆ ನೀರುಣಿಸುತ್ತಾರೆ ಎಂದು ತಿಳಿಸುತ್ತಾರೆ ಶಾಲೆಯಲ್ಲಿ 18 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ತೋಟಗಾರಿಕೆ ಶಿಕ್ಷಕ ಮಲ್ಲಿಕಾರ್ಜುನ ಮಲ್ಕಾಪುರೆ. ಉದ್ಯಾನ ರೂಪಿಸುವಲ್ಲಿ ಶಿಕ್ಷಕರು, ವಿದ್ಯಾರ್ಥಿಗಳು, ಪಾಲಕರು ಹಾಗೂ ಗ್ರಾಮಸ್ಥರ ಸಹಕಾರ ಇದೆ ಎಂದು ಹೇಳುತ್ತಾರೆ.

ಶಾಲೆ ವಿದ್ಯಾರ್ಥಿಗಳು ಪರಿಸರ ಕಾಳಜಿಗಷ್ಟೇ ಸೀಮಿತರಾಗದೆ ಓದಿನಲ್ಲೂ ಮುಂದಿದ್ದಾರೆ. ಪದ್ಮಶ್ರೀ ನಾಗೇಶ 2013–14 ಸಾಲಿನಲ್ಲಿ ಜಿಲ್ಲೆಯ ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳ ಪೈಕಿ ಅತಿ ಹೆಚ್ಚು ಅಂಕ ಗಳಿಸಿದ್ದರು. ಕಳೆದ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ವರ್ಷಾರಾಣಿ ನಾಗನಾಥ ಶೇ 92 ಅಂಕ ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ.

ಪ್ರಯೋಗಕ್ಕೆ ಅಗತ್ಯ ಉಪಕರಣ ಹಾಗೂ ಗ್ರಂಥಾಲಯ ಸೌಲಭ್ಯವೂ ಶಾಲೆಯಲ್ಲಿ ಇದೆ. ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕಾಗಿ ಶಾಲೆಯಲ್ಲಿ ಹಾಡು, ನೃತ್ಯ, ಕೋಲಾಟ ಮತ್ತಿತರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದು ಹೇಳುತ್ತಾರೆ ಮುಖ್ಯ ಶಿಕ್ಷಕ ಪ್ರಕಾಶ ರಾಠೋಡ್.

ಮಕ್ಕಳ ಹೆಜ್ಜೆಗಳು-ಶಾಲಾ ಮಕ್ಕಳಿಗಿಲ್ಲಿ ಸಾಂಸ್ಕೃತಿಕ ಪಾಠ.

ಶಾಲಾ ಮಕ್ಕಳಿಗಿಲ್ಲಿ ಸಾಂಸ್ಕೃತಿಕ ಪಾಠ!
  

image

ಕುಷ್ಟಗಿ ತಾಲೂಕಿನ ಜಾಗೀರಗುಡದೂರಿನ ಸರ್ಕಾರಿ ಪ್ರೌಢಶಾಲೆಯ ಮಕ್ಕಳು ನಿತ್ಯದ ಪಠ್ಯ ವಿಷಯಕ್ಕೆ ಸೀಮಿತರಾಗದೇ ಪಠ್ಯೇತರದಲ್ಲೂ ಹೊಸ ಹೆಜ್ಜೆ ಇಟ್ಟಿದ್ದಾರೆ.

ಸರ್ಕಾರಿ ಶಾಲೆ ಎಂದರೆ ಮೂಗು ಮುರಿಯುವುದೇ ಹೆಚ್ಚು ಅದರಲ್ಲೂ ಗ್ರಾಮೀಣ ಪ್ರದೇಶದಲ್ಲಿ ಸರಿಯಾದ ಮೂಲಸೌಕರ್ಯ ಇರುವುದಿಲ್ಲ. ಆದರೆ ಈ ಶಾಲೆಯಲ್ಲಿ ಅಗತ್ಯ ಮೂಲ ಸೌಕರ್ಯಗಳಿವೆ. ಇನ್ನು ಅಂತರ್ಜಾಲ ವ್ಯವಸ್ಥೆ ಗ್ರಾಮೀಣ ಶಾಲೆಗಳಲ್ಲಿ
ಕಾಣುವುದೇ ವಿರಳ. 263 ವಿದ್ಯಾರ್ಥಿಗಳಿರುವ ಈ ವಿಭಿನ್ನ ಕಾರ್ಯಚಟುವಟಿಕೆಗಳಿಂದ ಕಳೆದ ಬಾರಿ ಎಸ್ಸೆಸ್ಸೆಲ್ಸಿ ಫಲಿತಾಂಶ ಶೇ.100ರಷ್ಟು ಸಾಧನೆ ಹೆಮ್ಮೆ ಈ ಶಾಲೆಗಿದೆ. ಗ್ರಾಮೀಣ ಪ್ರದೇಶ ಶಾಲೆಯ ಈ ಮಕ್ಕಳು ಬರೆದ ಕತೆ ಕವನ, ಲೇಖನಗಳು ಫೇಸ್‌
ಬುಕ್‌ನಲ್ಲಿ ಅನಾವರಣಗೊಂಡಿದ್ದು, ಹೆಚ್ಚು ಲೈಕ್‌ ಗಿಟ್ಟಿಸಿವೆ. ಅಲ್ಲದೇ ಈ ಶಾಲೆಯ ರಂಗ
ಚಟುವಟಿಕೆಗಳು ವಿದೇಶಿಗರನ್ನು ಸೂಜಿಗಲ್ಲಿನಂತೆ ಆಕರ್ಷಿಸಿದ್ದು, http://www.hejjegalushalapatrike.blogspot.com ಈ ಬ್ಲಾಗ್‌ ಮೂಲಕ ವೈವಿದ್ಯಮಯ ಕಾರ್ಯಚಟುವಟಿಕೆ ವಿಸ್ತರಿಸಿಕೊಂಡಿದೆ. ಇದಕ್ಕೆ ಮೂಲ ಪ್ರೇರಣೆ ರಂಗ
ಶಿಕ್ಷಕ ಗುರುರಾಜ ಹೊಸಪೇಟೆ.

2008ರಲ್ಲಿ ಈ ಶಾಲೆಗೆ ನೇಮಕಗೊಂಡಾಗಿನಿಂದ ಇಲ್ಲಿವರೆಗೂ ಹಲವು ವಿಧದ ರಂಗ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡ ಮಕ್ಕಳ ಕಲಿಕೆ ಸಾಮರ್ಥ್ಯ ಹೆಚ್ಚಿಸಲು ಪೂರಕವಾಗಿದ್ದಾರೆ. ನೀನಾಸಂ ಕಲಾವಿದರಾದ ಗುರುರಾಜ ಹೊಸಪೇಟೆ ಅವರು,
ಒಂದಲ್ಲ ಒಂದು ಕಾರ್ಯಚಟುವಟಿಕೆಗಳಿಂದ ಹೊಸತನ ಸೃಷ್ಟಿಸಿದ್ದಾರೆ.

ರಂಗ ಶಿಕ್ಷಕ ಗುರುರಾಜ ಹೊಸಪೇಟೆ ಅವರು ತಾವು ನೀನಾಸಂನಲ್ಲಿ ಕಲಿತಿರುವ ರಂಗ ಶಿಕ್ಷಣವನ್ನು ಮಕ್ಕಳ ಶೈಕ್ಷಣಿಕ ಪ್ರಜ್ಞೆಗೆ ಬಳಸಿಕೊಂಡಿದ್ದು ಅದರಲ್ಲೂ ಯಶಸ್ವಿಯಾಗಿದ್ದಾರೆ. ಶಾಲೆಯ ಮಕ್ಕಳು ಅಭಿನಯಿಸಿದ ನಾಟಕಗಳು ರಾಜ್ಯದ ವಿವಿಧೆಡೆಗಳಲ್ಲಿ ಪ್ರದರ್ಶನ ಕಂಡಿವೆ.

ಶಾಲೆಯ ಕಾರ್ಯಚಟುವಟಿಕೆ ಗಮನಿಸಿ, ಸಾಂಸ್ಕೃತಿಕ ಕಾರ್ಯಚಟುವಟಿಕೆ, ರಂಗ ಶಿಕ್ಷಣದ
ಹಿನ್ನೆಲೆಗೆ ಇನ್ನಷ್ಟು ಉತ್ತೇಜನ ಪೂರ್ವಕವಾಗಿ ರಾಜ್ಯದ ವಿವಿಧೆಡೆಯಿಂದ ಆಗಮಿಸಿ
ಕಾರ್ಯಾಗಾರಗಳನ್ನು ನಡೆಸಿದ್ದಾರೆ. ಈಚೆಗೆ ಜಾಗೀರಗುಡದೂರು ಶಾಲೆಗೆ ಜರ್ಮನಿಯ
ಗೋಥೆ ಇನ್ಸಿಟ್ಯೂಟ್‌ ನಿರ್ದೇಶಕ ಕ್ರಿಸ್ಟೋಫಾ ಅವರು ಭೇಟಿ ನೀಡಿ, ಮಕ್ಕಳೊಂದಿಗೆ
ಇಡೀ ದಿನ ಕಳೆದು ಅನೇಕ ವಿಷಯಗಳ ಕುರಿತು ಸಂವಾದ ನಡೆಸಿದರು ಎಂದು ಶಿಕ್ಷಕ ಗುರುರಾಜ್‌ ಹೇಳುತ್ತಾರೆ.

ಅಲ್ಲದೇ ಶಾಲೆಯ ಮುಖ್ಯ ಶಿಕ್ಷಕ ಈಶಪ್ಪ ತಳವಾರ ಹಾಗೂ ಶಿಕ್ಷಕ ವೃಂದ ಪ್ರೋತ್ಸಾಹದ ಬೆನ್ನು ತಟ್ಟುವಿಕೆಯಿಂದ ಈ ಸಾಧನೆ ಕಾರಣವಾಗಿದೆ ಎನ್ನುತ್ತಾರೆ ಗುರುರಾಜ್‌ ಹೊಸಪೇಟೆ. ಬೆಂಗಳೂರಿನ ಇಂಡಿಯಾ ಫೌಂಡೇಷನ್‌ ಆರ್ಟ್‌ ಸಂಸ್ಥೆ ಸರ್ವ ಶಿಕ್ಷಣ ಸಹಯೋಗದಲ್ಲಿ ವರ್ಷದ ಯೋಜನೆಯಾಗಿ ಮಕ್ಕಳ ಹೆಜ್ಜೆಗಳು ಜನಪದದತ್ತ ವೈವಿದ್ಯಮಯ
ಕಾರ್ಯಕ್ರಮಗಳು ಇಲ್ಲಿ ಮಾತಾಗಿವೆ. ಅಲ್ಲದೇ ಪ್ರತಿ ಮನೆಗೂ ಭೇಟಿ ನೀಡಿ ಸಂಪ್ರದಾಯ,
ಉಡುಗೆ, ತೊಡುಗೆ, ಹೆಜ್ಜೆ ಕುಣಿತ, ಸೋಬಾನೆ, ರಿವಾಯತ್‌ ಮೊದಲಾದವುಗಳನ್ನು
ದಾಖಲಿಸಿಕೊಂಡು ಮಕ್ಕಳ ಹೆಜ್ಜೆಗಳು ಸಾಕ್ಷಚಿತ್ರವೂ ನಿರ್ಮಾಣವಾಗಿದೆ.

ಅಲ್ಲದೇ ವಿಜ್ಞಾನ ವಿಷಯದಲ್ಲಿ ನಾಟಕ ಅಭಿನಯಿಸಿ ಸಹಿ ಎನಿಸಿಕೊಂಡಿದ್ದು, ರಾಜ್ಯಮಟ್ಟದ
ಪ್ರದರ್ಶನದಲ್ಲಿ ಭೇಷ್‌ ಗಿಟ್ಟಿಸಿದ್ದಾರೆ. ಬೆಂಗಳೂರಲ್ಲಿ ಜರುಗಿದ ಕಲಾ ಉತ್ಸವದಲ್ಲಿ ಈ ಮಕ್ಕಳು ತಮ್ಮ ಪ್ರತಿಭೆ ಅನಾವರಣಗೊಳಿಸಿದ್ದಾರೆ.

ಕತ್ರಿದಡ್ಡಿ ಹಳ್ಳಿಯಲ್ಲೊಂದು ಮಾದರಿ ಪ್ರೌಢಶಾಲೆ.

ಗುಡ್ಡದ ಮೇಲೊಂದು ಮಾದರಿ ಶಾಲೆ.
**************************
– ಅಕ್ಕಪ್ಪ ಮಗದುಮ್ಮ.
ದೂರದಿಂದ ನೋಡಿದರೆ ಕಲ್ಲುಬಂಡೆಗಳ ರಾಶಿ. ನೆತ್ತಿ ಸುಡುವ ಬಿಸಿಲು. ಕಾಡು ಪ್ರಾಣಿಗಳೇ ವಾಸಿಸುವ ನಿರ್ಜನ ಪ್ರದೇಶ. ಆದರೆ ಆ ಗುಡ್ಡ ಹತ್ತಿದರೆ ಅಲ್ಲೊಂದು ಪುಟ್ಟ ಗ್ರಾಮ. ಆ ಗ್ರಾಮದ ಎತ್ತರ ಪ್ರದೇಶದಲ್ಲೊಂದು ಪುಟ್ಟ ಶಾಲೆ. ಆ ಶಾಲೆ ಸುತ್ತ ಗಿಡ-ಮರಗಳ ಹಸಿರಿನ ಶೃಂಗಾರ. ಪ್ರಶಾಂತ ವಾತಾವರಣ. ಅಲ್ಲಿ ಕಾಲಿಟ್ಟರೆ ಯಾವುದೋ ಉದ್ಯಾನವನ ಪ್ರವೇಶಿಸಿದ ಅನುಭವ ಆಗುತ್ತದೆ. ಇದು ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಕತ್ರಿದಡ್ಡಿ ಹಳ್ಳಿಯ ಸರ್ಕಾರಿ ಪ್ರೌಢಶಾಲೆಯ ಸೊಬಗು.

ಬೈಲಹೊಂಗಲ ತಾಲೂಕು ಮೊದಲೇ ಬರಪೀಡಿತ ನಾಡು. ಇಲ್ಲಿ ಅರೆಮಲೆನಾಡಿನಲ್ಲಿ ಸುರಿಯುವ ಮಳೆಯ ಕೊನೇ ಹನಿಗಳು ಮಾತ್ರ ಧರೆಗಿಳಿಯುತ್ತವೆ. ಅಂತರ್ಜಲ ಮಟ್ಟವೂ ಕಡಿಮೆ. ಕುಡಿಯುವ ನೀರಿಗಾಗಿ ಪರದಾಡಬೇಕು. ಆದರೆ ಇಲ್ಲಿನ ಶಾಲೆಯ ಹಸಿರು ಹೊದಿಕೆಗೆ ಯಾವ ತೊಂದರೆಯೂ ಆಗದಂತೆ ಇಲ್ಲಿನ ಗ್ರಾಮಸ್ಥರು, ಶಿಕ್ಷಕರು, ಎಸ್​ಡಿಎಂಸಿ ಸದಸ್ಯರು ನಿಗಾವಹಿಸಿದ್ದಾರೆ. ನೀರಿನ ಕೊರತೆ ತೀವ್ರವಾದರೆ ಶಿಕ್ಷಕರೇ ಹಣ ಕೊಟ್ಟು ಟ್ಯಾಂಕರ್ ನೀರು ತರಿಸಿ ಗಿಡಗಳಿಗೆ ನೀರುಣಿಸುತ್ತಾರೆ. ಒಟ್ಟಿನಲ್ಲಿ ಶಾಲೆಯ ಪರಿಸರ ಹಸಿರಾಗಿರಬೇಕು ಎಂಬುದು ಇವರ ಉದ್ದೇಶ. ಇನ್ನು ಶಾಲೆಗೆ ಕುಡಿವ ನೀರನ್ನು ಗ್ರಾಮಸ್ಥರೇ ಒದಗಿಸಿದ್ದಾರೆ. ಪ್ರತಿ ಕುಟುಂಬದಿಂದ ನೂರು, ಇನ್ನೂರು ಹಣ ಸೇರಿಸಿ, ಪೈಪ್ ಲೈನ್ ಅಳವಡಿಸಿದ್ದಾರೆ.

image

ಗಿಡ ನೆಡುವುದು ಕಡ್ಡಾಯ
“”””””””””””””””””””””
ಕತ್ರಿದಡ್ಡಿ ಶಾಲೆಯ ಇನ್ನೊಂದು ವೈಶಿಷ್ಟ್ಯ ಏನೆಂದರೆ ಇಲ್ಲಿಗೆ ಯಾವುದೇ ಅಧಿಕಾರಿ, ಅತಿಥಿಗಳು ಭೇಟಿ ನೀಡಿದರೂ ಆವರಣದಲ್ಲಿ ಸಸಿ ನೆಡಲೇಬೇಕು. ಇದು ಕಡ್ಡಾಯ. ಹಾಗಾಗಿಯೇ ಇಲ್ಲಿ ಸಾಗವಾನಿ, ಬಾದಾಮಿ, ಬೇವು, ನಿಂಬೆ, ಕರಿಬೇವು, ತೆಂಗು, ಪಪ್ಪಾಯಿ, ನುಗ್ಗೆ, ಬಾಳೆ, ತರಕಾರಿ ಹಾಗೂ ಆಯುರ್ವೆದ ಸಸ್ಯೋದ್ಯಾನ ನಿರ್ವಣವಾಗಿದೆ. ‘ಶಾಲೆಯಲ್ಲಿ ಒಟ್ಟು 167 ವಿದ್ಯಾರ್ಥಿಗಳಿದ್ದಾರೆ. ಒಬ್ಬ ವಿದ್ಯಾರ್ಥಿ ತಲಾ ಎರಡು ಗಿಡಗಳ ಪಾಲನೆ ಮಾಡಲೇಬೇಕು. ಮಕ್ಕಳು ಬಿಸಿಯೂಟ ಮಾಡಿದ ನಂತರ ಪಾತ್ರೆ ಹಾಗೂ ಕೈತೊಳೆದ ನೀರನ್ನು ಗಿಡಗಳಿಗೇ ಹಾಕುತ್ತಾರೆ. ಗಿಡ-ಮರಗಳ ನಿರ್ವಹಣೆಗೆಂದೇ ವಿದ್ಯಾರ್ಥಿಗಳಲ್ಲಿ ಏಳು ಗುಂಪುಗಳನ್ನು ರಚಿಸಲಾಗಿದೆ’ ಎನ್ನುತ್ತಾರೆ ಶಿಕ್ಷಕಿ ಸುಜಾತಾ ಪಾಟೀಲ್.

ಸಕಲ ಸೌಲಭ್ಯ
“””””””””””””
ಶಾಲೆಯಲ್ಲಿ ಮಕ್ಕಳಿಗೆ ಎಲ್ಲ ಸೌಲಭ್ಯಗಳೂ ಇವೆ. ಕಲಿಕೆಗೆ ಪೂರಕವಾದ ಪ್ರಯೋಗಾಲಯ, ಗ್ರಂಥಾಲಯ, ಕಂಪ್ಯೂಟರ್, ಚಿತ್ರಕಲೆ, ಯೋಗ, ಮೈದಾನ, ಹೂದೋಟ, ಒಳಾಂಗಣ ಕ್ರೀಡೆಗಳಾದ ಟೇಬಲ್ ಟೆನಿಸ್, ಕೇರಂ, ಚೆಸ್ ಸೌಕರ್ಯಗಳಿವೆ. ಎರಡು ಎಕರೆ ಸುಸಜ್ಜಿತ ಆಟದ ಮೈದಾನವಿದೆ. ವಿದ್ಯಾರ್ಥಿಗಳು ಕ್ರೀಡೆಯಲ್ಲೂ ಎತ್ತಿದ ಕೈ. ತೀವ್ರ ನಡಿಗೆ, ಫುಟ್​ಬಾಲ್ ಪಂದ್ಯದಲ್ಲಿ ಸತತ ನಾಲ್ಕು ವರ್ಷ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಈ ಶಾಲೆಗೆ ಸುತ್ತಮುತ್ತಲಿನ ಒಂಭತ್ತು ಹಳ್ಳಿಗಳಿಂದ ಜನರು ಬರುತ್ತಾರೆ. ಪ್ರತಿದಿನ 5-6 ಕಿ.ಮೀ. ನಡೆಯಬೇಕಾದ ಅನಿವಾರ್ಯತೆಯಿದೆ. ಹಾಗಾಗಿ ತೀವ್ರ ನಡಿಗೆಯಲ್ಲಿ ಸಹಜವಾಗಿಯೇ ಗೆಲ್ಲುತ್ತಾರೆ. ‘ಶಾಲೆಗೆ ಬರಲು ಕಾಲ್ನಡಿಗೆಯೇ ಗತಿ. ಹಾಗಾಗಿ ತೀವ್ರ ನಡಿಗೆ ಸ್ಪರ್ಧೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಲು ಸಹಾಯವಾಯಿತು’ ಎನ್ನುತ್ತಾಳೆ ವಿದ್ಯಾರ್ಥಿನಿ ಬಾಳಮ್ಮ ಗೋಡಗೇರ.

ಶೇ.100 ಫಲಿತಾಂಶ
“””””””””””””””””””
ಪ್ರೌಢಶಾಲೆಯ ವಿದ್ಯಾರ್ಥಿಗಳು ಕೇವಲ ಕ್ರೀಡೆ ಹಾಗೂ ಪರಿಸರ ಬೆಳೆಸುವುದರಲ್ಲಿ ಮಾತ್ರ ನಿಸ್ಸೀಮರಲ್ಲ. ಶಿಕ್ಷಣದಲ್ಲೂ ಎತ್ತಿದ ಕೈ. ಎಸ್​ಎಸ್​ಎಲ್​ಸಿ ಪರೀಕ್ಷೆಯಲ್ಲಿ ಸತತ ಆರು ವರ್ಷ ನೂರಕ್ಕೆ ನೂರರಷ್ಟು ಫಲಿತಾಂಶ ಪಡೆದಿದ್ದಾರೆ. 8, 9ನೇ ತರಗತಿಯಲ್ಲಿದ್ದಾಗಲೇ ಮಕ್ಕಳನ್ನು ಮಧ್ಯಮ, ಉತ್ತಮ, ಅತ್ಯುತ್ತಮ ಎಂದು ವಿಂಗಡಿಸಿ, 10ನೇ ತರಗತಿ ಆರಂಭದಲ್ಲೇ ಅವರವರ ಮಟ್ಟಕ್ಕೆ ಅನುಗುಣವಾಗಿ ನುರಿತ ಶಿಕ್ಷಕರಿಂದ ಪಾಠ ಮಾಡಿಸಲಾಗುತ್ತದೆ. ಅಷ್ಟೇ ಅಲ್ಲ ಜಿಲ್ಲೆಯಲ್ಲಿ ಆಯೋಜಿಸುವ ವಿಜ್ಞಾನ ವಸ್ತು ಪ್ರದರ್ಶನ, ಚರ್ಚಾಸ್ಪರ್ಧೆ, ರಸಪ್ರಶ್ನೆ, ವಿಜ್ಞಾನ ಪರೀಕ್ಷೆ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲೂ ಪ್ರಥಮ ಸ್ಥಾನ ಗಿಟ್ಟಿಸಿಕೊಳ್ಳುತ್ತಾರೆ. ‘ವಿವಿಧ ಶಾಲೆಗಳ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಶಾಲೆಗೆ ಕರೆಸಿ ವಿವಿಧ ವಿಷಯಗಳ ಕುರಿತು ಸಂವಾದ ಏರ್ಪಡಿಸಲಾಗುತ್ತದೆ. ವಿದ್ಯಾರ್ಥಿಗಳ ಆಸಕ್ತಿಗೆ ಅನುಗುಣವಾಗಿ ಪಠ್ಯ, ಪಠ್ಯೇತರ ಚಟುವಟಿಕೆಗಳ ಶಿಕ್ಷಣ ನೀಡುತ್ತಿರುವ ಕತ್ರಿದಡ್ಡಿ ಸರ್ಕಾರಿ ಪ್ರೌಢಶಾಲೆಗೆ 2015-16ನೇ ಸಾಲಿನ ‘ಜಿಲ್ಲೆಯ ಅತ್ಯುತ್ತಮ ಪ್ರೌಢಶಾಲೆ’ ಹಾಗೂ ‘ಸ್ವಚ್ಛ ಪರಿಸರ ಶಾಲೆ’ ಪ್ರಶಸ್ತಿ ಲಭಿಸಿದೆ’ ಎನ್ನುತ್ತಾರೆ ಮುಖ್ಯಾಧ್ಯಾಪಕ ಎ.ಎಸ್. ಇಂಗಳಗಿ.

ಅಧಿಕಾರಿಗಳ ಸಹಕಾರ
“”””””””””””””””””””
ಡಿಡಿಪಿಐ, ಬಿಇಒ, ಜನಪ್ರತಿನಿಧಿಗಳು, ಎಸ್​ಡಿಎಂಸಿ ಸದಸ್ಯರು ಹಾಗೂ ಗಣ್ಯರು ಭೇಟಿ ನೀಡಿ, ಸಸಿ ನಡುವ ಮೂಲಕ ಶಿಕ್ಷಕರ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಶಾಲೆ ಹಾಗೂ ಬಡ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ವೈಯಕ್ತಿವಾಗಿ ಧನ ಸಹಾಯ ಮಾಡಿದ್ದಾರೆ.

ಪಾಲಕರಿಗೆ ನೋಟಿಸ್
“””””””””””””””””””
ಮಕ್ಕಳ ಹಾಜಾರಾತಿ ಹೆಚ್ಚಿಸಲು ಶಿಕ್ಷಕರೇ ದಾರಿ ಕಂಡುಕೊಂಡಿದ್ದಾರೆ. ಶಾಲೆಗೆ ಪದೇಪದೆ ರಜಾ ಮಾಡುವ ಮಕ್ಕಳ ಪಾಲಕರಿಗೆ ಪ್ರತಿವಾರ ನೋಟಿಸ್ ನೀಡುತ್ತಾರೆ. ಮೂರು ನೋಟಿಸ್ ನೀಡಿದರೂ ವಿದ್ಯಾರ್ಥಿಗಳು ರಜಾ ಮಾಡುತ್ತಿದ್ದರೆ ಸ್ವತಃ ಶಿಕ್ಷಕರೇ ಮನೆಗೆ ತೆರಳಿ, ಪಾಲಕರೊಂದಿಗೆ ರ್ಚಚಿಸಿ ಮಕ್ಕಳನ್ನು ಮರಳಿ ಶಾಲೆಗೆ ಕರೆತರುವ ಪ್ರಯತ್ನ ಮಾಡುತ್ತಾರೆ. ಹಾಗಾಗಿ ಮಕ್ಕಳ ಹಾಜರಾತಿ ಸಂಖ್ಯೆ ನಾಲ್ಕು ವರ್ಷಗಳಿಂದ ಶೇ.97 ಇದೆ.